Thursday, March 31, 2011

ಸವೆದಷ್ಟೂ... ಸವಿ ... ಸವಿಯಾಗುವದು ... !


ಹೊಸ.. 
ಹೊಸದು...
ಹಳಸುತ್ತ...
ಹಳತಾಗದು.. ...


ಚಿಗುರು..
ಚಿಗುರೊಡೆಯುತ್ತ...
ಎಂದಿಗೂ...
ಸದಾ..
ಹಸಿ...
ಹಸಿರಾಗಿರುವದು..


ಗೆಳೆಯಾ...


ಸವೆದಷ್ಟೂ...
ಸವಿ ...
ಸವಿಯಾಗುವದು.. 
ನೀ..
ಕೊಟ್ಟ... 
ಚಂದದ ಕನಸುಗಳು...
ಗೆಳೆಯರೇ..
ಈ ಫೋಟೋ ನೋಡಿ  ಸುಗುಣಾ ಅವರಿಗೂ ಸ್ಪೂರ್ತಿ  ಬಂದು   ಈ ಕವನ ಬರೆದಿದ್ದಾರೆ ನೋಡಿ...

ಹೊಸತನದ ಹಸಿರು ಚಿಗುರಿ
ನಿನ್ನಾಸರೆಯ ಉಸಿರಾಗುವಾಸೆ
ನಲ್ಲೆ ..

ಬರುವೆಯ ಹಸಿರಿಗೆ ಹೂವಾಗಿ....

ಹೊನ್ನಿನ ಬೆಳಕು ಅರಿವಿಲ್ಲದೆ
ನನ್ನ ತಾಕಲು ಪ್ರತಿ ಎಲೆಯ ಮೊಗ್ಗು
ನನ್ನವಳಂತೆ ಹೂವಾಗಿಸುವೆಯಾ ನಲ್ಲೆ...

ಬಾಡುವ ಮೊದಲು ಪುಷ್ಪವಾಗಿ
ನಗುವ ಎಲೆಗೆ ನಲ್ಲೆಯಾಗಿ
ಬೆಳ್ಮುಗಿಲಿಗೆ ಹೂಬಾಣವಾಗುವೆಯಾ...

ಬ್ಲಾಗ್ ಲೋಕದ ಆಶು ಕವಿ "ಪರಾಂಜಪೆಯವರಿಗೆ " ಈ  ಫೋಟೋ ಸ್ಫೂರ್ತಿ ಕೊಟ್ಟಿದೆ  ನೋಡಿ...


ಹಸಿರ ಸಿರಿಯಲಿ ಇಹುದು ಜೀವಜಾಲದ ಉಸಿರು
ಮನಭಾವ ಬೆಸೆಯುವುದು ವಿಕಸಿಸುವ ತಳಿರು
ನವಿರು ಭಾವನೆ ತು೦ಬಿ ಪಲ್ಲವಿಸಿ ಚಿಗುರು
ಉಲ್ಲಾಸವೀಯುವುದು ಒಳಗೂ ಹೊರಗೂ


ಮನದ ನ೦ದನವನದಿ ನೆನಪೊ೦ದೆ ಹಸಿರು
ಕೊರಡು ಕೊನರುವ ಕ್ಷಣಕೆ ಆಸೆಗಳ  ಬಸಿರು
ಏನೆ೦ದು ಬಣ್ಣಿಸಲಿ ಹಸಿರ ಸೊಬಗಿನ ಬೆಡಗು
ಹಸಿರು ಮಾಗುವ ಮುನ್ನ ತೋರು ನಿನ್ನಯ ಬೆರಗುಯುವ ಕವಿ  "ಮಹಾಬಲಗಿರಿಯವರಿಗೂ"  ಸ್ಪೂರ್ತಿ ಕೊಟ್ಟಿದೆ ಈ ಫೋಟೋ...
              ವಾಹ್............!!ಅರಳಿಬಿಡು ನನಗಾಗಿ ನಾಳೆ ಬೆಳಕ ಹರಿಯೆ

ಹಸಿರು ಎಲೆಗಳ ಮಧ್ಯೆ ನಾಚುತ್ತ ಬಳಕುತ್ತ
ಅರಳಲೋ ಬೇಡವೆಂದನುಮಾನ ತಾಳುತ್ತ
ನಾಳೆಗಳ ನೆನೆಯುತ್ತ ಹೂವಾಗೊ ಕನಸಿಂದ  
ತೋರುತಿರುವದು ಮೊಗ್ಗು ಚಂದದಿಂದ 

ನಾಳೆಗಳು ನಿನಗಿಹುದು ಚಂದದ ದಿನವಿಹುದು 
ಅರಳಿ ಕಂಪನು ಚೆಲ್ಲಿ ಸಂಭ್ರಮಿಪ ಮನವಿಹುದು
ಹಸಿರ ಉಸಿರಿನ ಮಧ್ಯೆ ಪ್ರೀತಿಹಂಚುತಲಿರುವೆ  
ಅರಳಿಬಿಡು ನನಗಾಗಿ ನಾಳೆ ಬೆಳಕ ಹರಿಯೆ 


ಮತ್ತೊಬ್ಬ ಗೆಳೆಯ "ಗಿರೀಶ್ .ಎಸ್."  ಅವರಿಗೆ ಸ್ಪೂರ್ತಿ ಕೊಟ್ಟಿದ್ದು ಹೀಗೆ....

ನವಿರು ನವಿರಾದ ಹಸಿರು ಎಲೆಗಳು,
ಸೂರ್ಯ ಕಿರಣಕ್ಕೆ ನಾಚುತ್ತ ಕಂಗೊಳಿಸುತ್ತಿವೆ
ಅಲ್ಲೊಂದು ಇಲ್ಲೊಂದು ಚಿಗುರು ಮೊಗ್ಗುಗಳು
ಹೂವಾಗಿ ಹೊರಬರಲು ಕಾಯುತ್ತಿವೆ ಹೊಡೆ
ಮಕರಂದ ಹೀರಲು ದುಂಬಿಗಳು ಎಲ್ಲೋ ಈ ಚಿಗುರು
ಹೊಡೆಯಲೆಂದು ಕಾಯುತ್ತಿವೆಮತ್ತೊಬ್ಬ ಉತ್ಸಾಹಿ ಗೆಳೆಯ ಕವಿ  "ವಸಂತ"  ಅವರಿಗೆ  ಸ್ಪೂರ್ತಿ ಕೊಟ್ಟಿದ್ದು ಹೀಗೆ...


ಕತ್ತಲಾದರೂ ಸರಿ
ನಾ ಕಾಯುತ್ತೇನೆ
ನಾಳೆ ಮೂಡಲಿರುವ ಬೆಳಕಿಗಾಗಿ..
ಕತ್ತಲಲಿ ನಾ ಮೊಗ್ಗಾದರೂ
ಉದಯ ರವಿ ಕಾಂತಿಗೆ ಸೋತು
ಹೂವಾಗಿ ಹರಳುತ್ತೇನೆ..

ನನ್ನ ಬದುಕು ಶಾಶ್ವತವಲ್ಲ
ಅದಕ್ಕಾಗಿ ನಾ ಚಿಂತಿಸಬೇಕಿಲ್ಲ

ನಾ ಹೂ ಅಲ್ಲವೆ
ಗರತಿಯ ಮುಡಿಯೋ
ದೇವರ ಗುಡಿಯೋ
ಚಟ್ಟದ ಅಡಿಯೋ
ನಾ ಸೇರಬಹುದೇನೊ ಅಲ್ಲವೆ ?...
Tuesday, March 22, 2011

ಪ್ರೇಮ... ಸುಮ ಪಕಳೆಗಳ... ಪುಳಕಿಸುವೆಯಲ್ಲ......!

ಇಳೆಗಿಳಿವ.. ..
ಬೆಳಗಿನ..
ಎಳೆ
ಬಿಸಿಲಿನಂದದಿ..


ಅರಳದ..


ಪ್ರೇಮ
ಸುಮ... 
ಪಕಳೆಗಳ...
ಪುಳಕಿಸಿ...


ಗೆಳೆಯಾ..


ನನಸಾಗದ...
ಸಾವಿರ
ಸವಿ
ಕನಸುಗಳ....


ನೀ..
ಬರೀದೆ.. 
ಚಿಗುರಿಸುವೆಯಲ್ಲ..!

ಈ ಫೋಟೋ ನೋಡಿ ಸುಗುಣಾ ಮಹೇಶರವರಿಗೂ ಕವನ ಬರೆಯುವ ಮನಸ್ಸಾಯಿತಂತೆ..
ಇದೋ ಅವರು ಬರೆದ ಕವನ...


ನೇಸರನ ಕಿರಣ ರಾಶಿಯ ಸ್ಪರ್ಶಕೆ
ಮುಗುಳ್ನಗೆಯ ಚೆಲ್ಲಿ ನಿಂತ ರೂಪಸಿ

ಕೆಂದುಟಿಯ ನಗೆಯಲಿ ಭಾಸ್ಕರನ
ಮುತ್ತಿಡಲು ಬಾಯ್ತೆರದು ಕುಳಿತಾ ರೂಪಸಿ

ಎಳೆಸಾದ ಮೊಗ್ಗು ಜಗ್ಗು ಹೊಡೆದು
ಯಾರಿಗೋ ಕಾದಂತಿಹುದು ನೋಡೆ ರೂಪಸಿ..

ಪ್ರೇಮಿಗಳ ಉತ್ತೇಜಿಸುವ ಕೆಂಪು ಕಂಗಳ ಕಣ್ಮಣಿ
ಕೋಮಲ ಹೃದಯಕೆ ತಂಪೆರಗುವವಳು ಇವಳೇ ಪ್ರೇಯಸಿ

ನಿಂತಲ್ಲೇ ಸೆಳೆವ ಪ್ರತಿರೂಪ
ಯಾರ ಕಣ್ಣಿಗೂ ಕಾಣದ ಅಪರೂಪ
ಪ್ರಕಾಶಣ್ಣನ ಕ್ಯಾಮರ ಕಣ್ಣಿಗೆ ಸಿಕ್ಕಳು
ನೋಡಿ ಈ ಕೆಂಪು ಕಂಗಳ ಬೆಡಗಿ....

(ಕವಯಿತ್ರಿ : ಶ್ರೀಮತಿ. ಸುಗುಣಾ ಮಹೇಶ)


ಈ ಫೋಟೋ ನೋಡಿ.. ಗೆಳೆಯ ಆಜಾದನಿಗೆ  ಸ್ಫೂರ್ತಿ ಬಂದು  ಕವನ ಬರೆದಿದ್ದಾನೆ... ನೋಡಿ...

ಬಾ ಹೂಬನಕೆ ಇನಿಯಾ
ಮುಳ್ಳು ಹರಿತೆಲೆಯ ತಲೆ
ಚುಚ್ಚುವುದು ಬಂದರೆ
ಅನುಮತಿಯಿಲ್ಲದಲೇ
ನಾಜೂಕು ಕಾಂಡ
ಮುಳ್ಳಿದ್ದರೂ ಭ್ರಮರ ಭಂಡ
ನುಸುಳುವುದು ಮಕರಂದಕಾಗಿ
ಹೆದರಿದ ಪತಂಗ ನೋಡುತಿರೆ ಮಂಕಾಗಿ
ಭರ ಭ್ರಮರದ ಸಂಭ್ರಮ,
ನಾಚಿದ ಕೆಂದುಟಿ ತೆರೆದ ಸುಮ
ಇನ್ನೂ ಮುಚ್ಚಿದ ಗರಿ ಬಿಚ್ಚದ ಮೊಗ್ಗು
ನೋಡುತಿದೆ ಅಳೆದಳೆದು
ಕಳೆದುಕೊಂಡರೂ ಗಳಿಸಿದ ತನ್ನಕ್ಕನ
ಗಳಿಸಿದರೂ ಕಳಕೊಂಡ ಭ್ರಮರನ
ನುಸುನಕ್ಕು ಅರಿತಂತೆ ಓಲಾಡಿಸಿ ತಲೆ
ಕಾಯುತಿದೆ ಮತ್ತೆ ಬರುವ ರವಿಗಾಗಿ
ರವಿತರುವ ಪುಳಕ ಸುಳಿವ ಋತುಗಾಗಿ
ಆ ಕಿರಣದಾಗಮನ ಭೃಂಗಸಂಗಕಾಗಿ.

Wednesday, March 9, 2011

ದಿನದ ಮೊದಲ ನಗುವಾಗಿ... ಬಾ..

....
ಮೊಲ್ಲೆ...
ಮೊಗ್ಗು..ಹೂವಾಗಿ ..
ಅರಳುವ...
ಮುಂಜಾನೆಯ...
ಮಂಜಲ್ಲಿ..
ನಿನ್ನ...
ಸಾವಿರ..  
ಸವಿನೆನಪುಗಳ..
ಹೊತ್ತು.. 
ಬಾ..ಹುಡುಗಿ...
ಈ..
ನನ್ನ .. 
ತುಟಿಗಳಲಿ...
ದಿನದ..
ಮೊದಲ 
ಮುಗುಳು ನಗುವಾಗಿ....